ಕ್ಯಾಂಬೆಲ್, ಥಾಮಸ್  
1777-1844. ಆಂಗ್ಲಕವಿ ವರ್ತಕನ ಮಗನಾದ ಈತ ಹುಟ್ಟಿದ್ದು ಗ್ಲಾಸ್ಗೊ ನಗರದಲ್ಲಿ, ಅಲ್ಲಿನ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ. ಎಡಿನ್ ಬರೋನಲ್ಲಿ ನ್ಯಾಯಶಾಸ್ತ್ರ ಪದವಿ ಪಡೆದ. ಆದರೂ ಸಾಹಿತ್ಯದಲ್ಲಿದ್ದ ಅಭಿರುಚಿಯಿಂದಾಗಿ ಲೇಖಕನಾದ. ಈತನ ಪ್ರಥಮ ಕೃತಿ ಪ್ಲಷರ್ಸ್ ಆಫ್ ಹೋಪ್ (1799) ಎಂಬ ಕವನ ಸಂಕಲನ. ಪ್ರಕಟವಾದ ಒಂದು ವರ್ಷದೊಳಗೇ ಇದು ನಾಲ್ಕು ಮುದ್ರಣ ಕಂಡಿತು. 1800ರಲ್ಲಿ ಕ್ಯಾಂಬೆಲ್ ಯೂರೋಪಿನ ಪ್ರವಾಸ ಕೈಗೊಂಡು ಹ್ಯಾಂಬರ್ಗ್‍ನಲ್ಲಿ ತಂಗಿದ್ದಾಗ ಹೊಹೆನ್‍ಲಿಂಡನ್ ಕಾಳಗವನ್ನು ಕಣ್ಣಾರೆ ನೋಡಿ ಬಂದ. 1820 ರಿಂದ 1830ರ ವರೆಗೆ ನ್ಯೂ ಮಂತ್ಲಿ ಮ್ಯಾಗಜಿûೀನಿನ ಸಂಪಾದಕನಾಗಿ ದುಡಿದ. ಈತ ಗರ್‍ಟ್ರೂಡ್ ಆಫ್ ವೈವೋಮಿಂಗ್ (1809). ಓಕನಾರ್ಸ್ ಚೈಲ್ಡ್ (1809), ಥಿಯೋಡೊರಿಕ್ (1824) ಎಂಬ ನೀಳ್ಗವನಗಳನ್ನೂ ಬರೆದಿದ್ದಾನೆ. ಆದರೆ ಇವೆಲ್ಲಕ್ಕಿಂತ ಈತ ಪ್ರಸಿದ್ಧನಾಗಿರುವುದು ತನ್ನ ರಣಗೀತೆಗಳಿಂದಾಗಿ, ಯೀ ಮ್ಯಾರಿನರ್ಸ್ ಆಫ್ ಇಂಗ್ಲೆಂಡ್, ಹೊಹೆನ್‍ಲಿಂಡನ್, ಬ್ಯಾಟಲ್ ಆಫ್ ದಿ ಬಾಲ್ಟಿಕ್, ದಿ ಸೋಲ್ಜರ್ಸ್ ಡ್ರೀಂ-ಈ ಕವನಗಳು ಓದುಗರಲ್ಲಿ ಕೆಚ್ಚು, ರಣೋತ್ಸಾಹ, ದೇಶಪ್ರೇಮಗಳನ್ನು ಇಂದಿಗೂ ಉಕ್ಕಿಸುವಷ್ಟು ಸತ್ತ್ವಪೂರ್ಣವಾಗಿವೆ. ಆಂಗ್ಲಸಾಹಿತ್ಯದಲ್ಲಿ ಇವುಗಳಿಗೆ ಸದೃಶವಾದ ರಣಗೀತೆಗಳು ಅಪೂರ್ವ.

	ಈತ ಒಳ್ಳೆಯ ವಿಮರ್ಶಕನೆಂದೂ ಖ್ಯಾತನಾಗಿದ್ದಾನೆ. ಈತನ ಸ್ಪೆಸಿಮೆನ್ಸ್ ಆಫ್ ದಿ ಬ್ರಿಟಿಷ್ ಪೊಯೆಟ್ಸ್ (1819) ಕೃತಿ ವಿಮರ್ಶನ ಸಾಹಿತ್ಯಕ್ಕೆ ಒಂದು ಉತ್ತಮ ಕೊಡುಗೆಯಾಗಿದೆ. ಇವುಗಳಲ್ಲದೆ ಈತ ಇನ್ನೂ ಅನೇಕ ಪುಸ್ತಕಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾನೆ. ಅವುಗಳಲ್ಲಿ ಮೂರನೆಯ ಜಾರ್ಜ್‍ನ ಆಳ್ವಿಕೆಗೆ ಸಂಬಂಧಪಟ್ಟ ಆನಲ್ಸ್ ಆಫ್ ಗ್ರೇಟ್ ಬ್ರಿಟನ್ ಕೃತಿಯೂ ಒಂದು. 1805ರಲ್ಲಿ ಈತ ಸರ್ಕಾರದಿಂದ ನಿವೃತ್ತಿವೇತನ ಪಡೆದ. ಗ್ಲಾಸ್ಗೊ ವಿಶ್ವವಿದ್ಯಾನಿಲಯದ ರೆಕ್ಟಾರ್ ಆಗಿ ಮೂರು ಬಾರಿ ಚುನಾಯಿತನಾದ. ಈ ಚುನಾವಣೆಗಳಲ್ಲೊಮ್ಮೆ ಈತ ಪ್ರಸಿದ್ಧ ಕಾದಂಬರಿಕಾರನಾದ ಸರ್ ವಾಲ್ಟರ್ ಸ್ಕಾಟನನ್ನು ಸೋಲಿಸಿದನೆನ್ನಲಾಗಿದೆ. ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಈತನ ಸಮಾಧಿಯಿದೆ. ಈತನಿಗೆ ಸಂಬಂಧಿಸಿದಂತೆ 1849ರಲ್ಲಿ ಡಬ್ಲ್ಯೂ.ಬಿಯಟ್ಟಿ ಎಂಬಾತ ಲೈಫ್ ಅಂಡ್ ಲೆಟರ್ಸ್ ಎಂಬ ಗ್ರಂಥವನ್ನು ಪ್ರಕಟಿಸಿದ್ದಾನೆ. 						 (ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ